Wednesday, 13 December 2017

ಅಪ್ಪೆ ಹುಳಿ / Appe Huli

ಅಪ್ಪೆಹುಳಿ ಬಾಯೆಲ್ಲಾ ರುಚಿ 




                                                  "ಅಪ್ಪೆ ಹುಳಿ" ಅಥವಾ "ನೀರ್ಗೊಜ್ಜು (ನೀರು ಗೊಜ್ಜು)" ಅಥವಾ ಸಾಂಬ್ರಾಣಿ ಹೆಚ್ಚಾಗಿ "ಉತ್ತರ ಕನ್ನಡ" ಮತ್ತು ಶಿವಮೊಗ್ಗ  ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ.
                  ಇದು ಸ್ವಲ್ಪ ಹುಳಿಯಾಗಿದ್ದು ಕುಡಿಯಲು ಬರುತ್ತದೆ. ಹೆಚ್ಚಾಗಿ ಇದನ್ನು "ಅಪ್ಪೆಕಾಯಿ" ಎಂದು ಕರೆಯಲ್ಪಡುವ ಮಾವಿನಕಾಯಿಯಿಂದ ಮಾಡುವುದರಿಂದ "ಅಪ್ಪೆಹುಳಿ" ಎಂದು ಹೆಸರು ಬಂದಿದೆ.
        ಆದರೆ ಇದನ್ನು ಅಪ್ಪೆಕಾಯಿ ಅಲ್ಲದೆ, ನಿಂಬೆಹಣ್ಣು, ಬಿಂಬಳಕಾಯಿ, ಕಂಚಿಕಾಯಿಯಿಂದ ಕೂಡ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು :-

InGrEdIeNtS :-

  1. ಅಪ್ಪೆಕಾಯಿ (ಮಾವಿನಕಾಯಿ) / ನಿಂಬೆ ಹಣ್ಣು / ಬಿಂಬಳ ಕಾಯಿ / ಕಂಚೀ ಕಾಯಿ
  2. ನೀರು
  3. ಉಪ್ಪು
  4. ಸಕ್ಕರೆ
  5. (ಕೊಬ್ಬರಿ) ಎಣ್ಣೆ
  6. ಸಾಸಿವೆ
  7. ಇಂಗು
  8. ಒಣಮೆಣಸು
  9. ಹಸಿಮೆಣಸು

ಮಾಡುವ ವಿಧಾನ :-

HoW To Prepare :-

  1. ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ ಬೇಯಿಸಿ.
  2. ನಿಂಬೆಹಣ್ಣಾದರೆ ರಸ ಹಿಂಡಬೇಕು.
  3. ಆರಿದ ನಂತರ ಚೆನ್ನಾಗಿ ಕಿವುಚಿ.
  4. ತಕ್ಕಷ್ಟು ನೀರು, ಉಪ್ಪು, ಚಿಟಿಕೆ ಸಕ್ಕರೆ ಹಾಕಿ.
  5. ಸಾಸಿವೆ, ಒಣಮೆಣಸಿನ ಚೂರು, ಇಂಗು ಹಾಕಿ ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ.
                                              ಅಥವಾ/OR

  1. ಮಾವಿನಕಾಯಿ ಸಿಪ್ಪೆ ಸಹಿತ ಕತ್ತರಿಸಿ ೧ ಹಸಿ ಮೆಣಸು ಹಾಕಿ ಮಿಕ್ಸಿಗೆ ಹಾಕಿ.
  2. ನಂತರ ಅದನ್ನು ಸೋಸಿ, ಅದಕ್ಕೆ ನೀರು ಸೇರಿಸಿ ಉಪ್ಪು ಹಾಕಿ
  3. ಒಗ್ಗರಣೆಗೆ ಕೊಬ್ಬರಿ ಎಣ್ಣೆ, ಸಾಸಿವೆ, ಇಂಗು, ಒಣಮೆಣಸು ಹಾಕಿ
  4. ಒಗ್ಗರಿಸಿದ ನಂತರ ಒಣ ಮೆಣಸನ್ನು ಸ್ವಲ್ಪ ನುರಿಯಿರಿ.

  "ಅಪ್ಪೆ ಹುಳಿಯನ್ನು  ತಿನ್ನಿ ಮನೆಯಲ್ಲಿ Try  ಮಾಡಿ "
"ನಿಮ್ಮ ಸಹೋದರ/ಸಹೋದರಿಯ ಜೊತೆ Share ಮಾಡಿ"

ಇಷ್ಟ ಆದಲ್ಲಿ ನಿಮ್ಮ ಅನಿಸಿಕೆ ತಿಳಿಸಿ 

Saturday, 2 December 2017

ಅಪ್ಪೆಮಿಡಿ / Appemidi

ಅಪ್ಪೆಮಿಡಿ ರುಚಿ ಬಲು ಜೋರು




ಅಪ್ಪೆ, ಅಪ್ಪೆಕಾಯಿ, ಅಪ್ಪೆಮಿಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದೊಂದು ವೈಶಿಷ್ಟ್ಯಪೂರ್ಣವಾದ ಉಪ್ಪಿನಕಾಯಿಗೆಂದೇ ಬಳಸುವ ಮಾವು. ಇವು ಸುವಾಸನಾಭರಿತವಾಗಿ ಹಾಗೂ ರುಚಿಕರವಾಗಿದ್ದು ಉಪ್ಪಿನಕಾಯಿ ಮಾಡಲು ಪ್ರಶಸ್ತವಾಗಿರುತ್ತವೆ. ಅಪ್ಪೆಮಾವು ಜೀರಿಗೆ ಸುವಾಸನೆ, ಕರ್ಪೂರದ ಸುವಾಸನೆ ಮುಂತಾದ ವಿವಿಧ ಸುವಾಸನೆಗಳಲ್ಲಿ ದೊರಕುತ್ತದೆ. ಎಲ್ಲಾ ಮಾವಿನತಳಿಗಳು ಅನಾಕಾರ್ಡಿಯೆಸಿಯೇ ಕುಟುಂಬವರ್ಗಕ್ಕೆ ಸೇರಿದ್ದರೂ ಅಪ್ಪೆಮಾವು ಅನುವಂಶಿಕವಾಗಿ ಸಾಂಪ್ರದಾಯಿಕ ತಳಿಗಳಿಗಿಂತ ವಿಭಿನ್ನವಾಗಿದೆ. ಅತ್ಯುತ್ತಮ ತಳಿಗಳನ್ನು ಅವುಗಳ ರುಚಿ, ಆಕಾರ, ಗಾತ್ರ, ಸುವಾಸನೆ, ಬಾಳಿಕೆ ಅವಧಿ, ಹಣ್ಣಿನ ತಿರುಳುಬಣ್ಣ, ಅಷ್ಟೆ ಅಲ್ಲದೆ ಕಟಾವಿನ ಸಮಯದಿಂದ ಗುರುತಿಸುತ್ತಾರೆ. ಅಪ್ಪೆಮಿಡಿಯ ಹೂವು ಹಾಗೂ ಕಾಯಿ ಆಗಲು ಅತಿ ಹೆಚ್ಚು ತೇವಾಂಶಭರಿತ ವಾತಾವರಣ ಬೇಕಾಗುತ್ತದೆ. ಸ್ವಾಭಾವಿಕವಾಗಿ ಅಪ್ಪೆಮಿಡಿ ಮರಗಳು ಉತ್ತರ ಕನ್ನಡದ ನದಿತೀರ, ಹೊಳೆಬದಿಗಳಲ್ಲಿ ಕಂಡುಬರುತ್ತದೆ.

 ವಾಣಿಜ್ಯಕವಾಗಿ ಇದೊಂದು ಉಪ ಅರಣ್ಯ ಉತ್ಪನ್ನವಾಗಿದೆ. ಪೂರ್ಣ ಬೆಳೆದ ಒಂದು ಅಪ್ಪೆಮಾವಿನ ಮರ ಒಂದು ವರ್ಷಕ್ಕೆ ೫೦೦೦ದಿಂದ ೧೦೦೦೦ವರೆಗೆ ಮಿಡಿಗಳನ್ನು ಬಿಡುತ್ತದೆ. ಕಾಯಿಯು ಹಣ್ಣಾದಮೇಲೆ ಸ್ವಲ್ಪ ಸಿಹಿಯಾದ ರುಚಿಯನ್ನು ಪಡೆದುಕೊಳ್ಳುವುದಕ್ಕೆ 'ಜೀರಿಗೆ ಮಿಡಿ' ಹಾಗೂ ಹುಳಿಯ ಅಂಶವನ್ನೇ ಇಟ್ಟುಕೊಳ್ಳುವುದು 'ಅಪ್ಪೆಮಿಡಿ' ಎಂದು ಕರೆಯುತ್ತಾರೆ.

ವಿವಿಧ ತಳಿಗಳು :-

                                                             ಉತ್ತರಕನ್ನಡ ಜಿಲ್ಲೆಯಲ್ಲಿಯೇ ೩೦೦ಕ್ಕೂ ಹೆಚ್ಚಿನ ತಳಿಗಳು ಇವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ನೂರಾರು ಮಿಡಿಮಾವಿನ ತಳಿಗಳಿದ್ದು, ಪ್ರತಿ ಜಿಲ್ಲೆಯಲ್ಲಿ ೨೫-೩೦ರಷ್ಟು ಗೊಂಚಲು ಫಲ ನೀಡುವ ಕೃಷಿ ಯೋಗ್ಯ ತಳಿಗಳನ್ನು ಗುರುತಿಸಬಹುದಾಗಿದೆ. ಉತ್ತರಕನ್ನಡ, ಶಿವಮೊಗ್ಗ ಕಡೆಯ ಕೃಷಿಕರು ತಮ್ಮ ತಮ್ಮ ಊರಿನ ಸುತ್ತಮುತ್ತ ಕಂಡುಬರುವ ವಿಶಿಷ್ಠ ಗುಣಗಳುಳ್ಳ ಮರಗಳನ್ನು ಗುರುತಿಸಿ ಅವುಗಳಿಂದ ಕಸಿ ತಳಿಗಳನ್ನು ರೂಪಿಸಿದ್ದಾರೆ.
 ಕೆಲವು ತಳಿಗಳಿಗೆ ಅವುಗಳನ್ನು ಬೆಳೆಸಿದ ಕುಟುಂಬ ನಿರ್ದಿಷ್ಟ ಹೆಸರುಗಳೂ ಇವೆ:-
  1.  ಅನಂತಭಟ್ಟ ಅಪ್ಪೆ
  2.  ಮಾಳಂಜಿ ಅಪ್ಪೆ
  3.  ಹಳದೋಟ ಅಪ್ಪೆ
  4.  ಕರ್ಪೂರ ಅಪ್ಪೆ
  5.  ಚೌತಿ ಅಪ್ಪೆ
  6.  ಕೆಂಗ್ಲೆ ಬಿಳಿ ಅಪ್ಪೆ
  7.  ಭೀಮನಗುಂಡಿ ಅಪ್ಪೆ
  8.  ಅಡ್ಡೇರಿ ಜೀರಿಗೆ
  9.  ಚೆನ್ನಿಗನತೋಟ ಜೀರಿಗೆ
  10.  ಕೂರಂಬಳ್ಳಿ ಜೀರಿಗೆ
  11.  ದೊಂಬೆಸರ ಜೀರಿಗೆ
  12.  ಜೇನಿ ಜೀರಿಗೆ
  13.  ಅಡ್ಡೇರಿ ಜೀರಿಗೆ
  14.  ಪಡವಗೋಡು ಜೀರಿಗೆ
  15.  ಕಾಳಿಗುಂಡಿ ಅಪ್ಪೆ
  16.  ಭೀಮನಕೋಣೆ ಕೆಂಚಪ್ಪೆ
  17.  ಜಲ್ಲೆ ಅಪ್ಪೆ
  18.  ಸೂಡೂರು ಲಕ್ಷ್ಯ ಅಪ್ಪೆ
  19.  ಕರ್ಣಕುಂಡಲ
  20.  ಹಾರ್ನಳ್ಳಿ ಅಪ್ಪೆ
  21.  ಕಂಚಪ್ಪೆ
  22.  ಹೊಸಗದ್ದೆ ಅಪ್ಪೆ
  23.  ಗೆಣಸಿನಕುಳಿ ಜೀರಿಗೆ
  24. ಅಂಡಗಿ ಅಪ್ಪೆ
  25.  ಕಣಗಲಕೈ ಅಪ್ಪೆ
     ಮುಂತಾದ ಹೆಸರಿನ ಅಪ್ಪೆ ತಳಿಗಳಿವೆ.


"ನಮ್ಮೂರಿನ ಅಪ್ಪೆಮಿಡಿ ತಿನ್ನಲು ಬಲು ರುಚಿ "
"ಅಪ್ಪೆಮಿಡಿ ತಿನ್ನಿ ನಿಮ್ಮ ಸ್ನೇಹಿತರಿಗೆ ತಿನಿಸಿ "

Thursday, 30 November 2017

ಉತ್ತರ ಕನ್ನಡದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಭಾಗ ೧ / Visiting Places Of North Canara Part 1

ಯಾಣ ( YANA )

                                                      Photo ಕೃಪೆ:- Gopi Jolly

                                                                     ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಕುಮಟಾದಿಂದ ೨೮(28) ಹಾಗು ಶಿರಸಿ ಇಂದ ೫೩(53) ಕಿ.ಮಿ. ದೂರದಲ್ಲಿದೆ. " ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ” ಎಂಬ ಮಾತು ಚಾಲ್ತಿಯಲ್ಲಿದೆ. ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ರಸ್ತೆಯಾಗಿದೆ. ಕೇವಲ ಒಂದು ಕಿಲೋಮೀಟರ ದೂರವನ್ನಷ್ಟೇ ನಡೆಯಬೇಕಾಗುವದು. ಕುಮಟೆಯಿಂದ ಹರಿಟೆಯ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿ ಶಿರಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಕಾಡಿನಲ್ಲಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ.

ಯಾಣದ ಇತಿಹಾಸ :-


History Of Yana :-


                                           ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦(120) ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು.
                                       ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. 
                                        ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ.
                                         ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ.
                                            ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ.ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ. 

ಯಾಣದ ಅಂತರ :-
Distance Of Yana :-

  1. ಕುಮಟಾ (Kumta) To ಯಾಣ(Yana) :- ೨೮(28)km 
  2. ಶಿರಸಿ (Sirsi) To ಯಾಣ(Yana) :- ೫೩(53)km
  3. ಕಾರವಾರ (Karwar) To ಯಾಣ(Yana) :- ೯೧(91)km
  4. ಮಂಗಳೂರು (Mangalore) To ಯಾಣ(Yana) :- ೨೨೮(228)km
  5. ಬೆಂಗಳೂರು (Bengalure) To ಯಾಣ(Yana) :- ೪೫೮(458)km

ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ
ಬನ್ನಿ ಯಾಣಕ್ಕೆ ಒಮ್ಮೆ ಭೇಟಿ ನೀಡಿ 

Wednesday, 29 November 2017

ನಮ್ಮ ಉತ್ತರ ಕನ್ನಡದ ಬಗ್ಗೆ ಕಿರುಪರಿಚಯ / Small Introduction Of North Canara

ಉತ್ತರ ಕನ್ನಡ ಜಿಲ್ಲೆಯು ಹೇಗೆ ಬೇರೆ ಜಿಲ್ಲೆಗಳಿಗಿಂತ ವಿಭಿನ್ನ ..!

How Uttara Kannada District is Different Than Other Districts...!


                               "ಉತ್ತರ ಕನ್ನಡ(north canara)" ಜಿಲ್ಲೆಯು ಕರಾವಳಿ, ಮಲೆನಾಡು ಹಾಗು ಬಯಲು ಸೀಮೆಯನ್ನು ಒಳಗೊಂಡ ಒಂದು ವಿಭಿನ್ನ ಕರ್ನಾಟಕದ ಜಿಲ್ಲೆಯಾಗಿದೆ. ಇಲ್ಲಿ ನಿಮಗೆ ಕರಾವಳಿಯ ಸಮುದ್ರವು ಸಿಗುವುದು, ಮಲೆನಾಡಿನ ವೈಭವವು ಕಾಣಸಿಗುವುದು.
 ಒಟ್ಟು ೧೨(12) ತಾಲ್ಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗೆ ಕಾರವಾರವು ಜಿಲ್ಲಾ ಕೇಂದ್ರವಾಗಿದೆ . 
  1. ಕಾರವಾರ / karwar ( ಜಿಲ್ಲಾಕೇಂದ್ರ )
  2. ಅಂಕೋಲಾ / ankola
  3. ಕುಮಟಾ / kumta
  4. ಹೊನ್ನಾವರ / honnavar
  5. ಭಟ್ಕಳ / bhatkal
  6. ಶಿರಸಿ  / sirsi
  7. ಸಿದ್ದಾಪುರ / siddapur
  8. ಯಲ್ಲಾಪುರ / yallapur
  9. ಮುಂಡಗೋಡ / mundgod
  10. ಹಳಿಯಾಳ /  haliyal
  11. ಜೋಯಿಡಾ / joida
  12. ದಾಂಡೇಲಿ / dandeli ( ಹೊಸದಾದ ತಾಲ್ಲೂಕು )




ಉತ್ತರ ಕನ್ನಡ ಜಿಲ್ಲೆಯ ಇತಿಹಾಸ :- History of North Canara :-

          ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.4-3ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಅಶೋಕನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. 2 ರಿಂದ ಪ್ರ.ಶ.3ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. 2 ಮತ್ತು 3ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. 4 ರಿಂದ 6ನೆಯ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಾಳುಕ್ಯರು (6-8ನೆಯ ಶತಮಾನ), ರಾಷ್ಟ್ರಕೂಟರೂ (8-10ನೆಯ ಶತಮಾನ) ಆಳಿದರು. ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗ ಬನವಾಸಿ 12000 ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. 11 ಮತ್ತು 13ನೆಯ ಶತಮಾನಗಳಲ್ಲಿ ಹಾನಗಲ್ಲು ಮತ್ತು ಗೋವೆಯ ಕದಂಬರು ಚಾಳುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಭ್ಯ ಸು.16ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. 17-18ನೆಯ ಶತಮಾನಗಳಲ್ಲಿ ಕೆಳದಿಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳೆಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. 18ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು. 1799ರಲ್ಲಿ ಶ್ರೀರಂಗಪಟ್ಟಣದ ಪತನವಾದ ಅನಂತರ ಇದು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತರಚನೆಯ ಅನಂತರ (1956) ಕರ್ನಾಟಕ ರಾಜ್ಯಕ್ಕೆ ಸೇರಿತು.


ಉತ್ತರ ಕನ್ನಡ ಭೂಗೋಳ :-

North Canara Geography :-


         ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ ಕರಾವಳಿ ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, ಗೇರುಸೊಪ್ಪೆಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ. ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ ಕಾರವಾರ, ಅಂಕೋಲ, ಕುಮಟ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿವೆ. ಘಟ್ಟದ ಮೇಲೆ ಶಿರಸಿ, ಯಲ್ಲಾಪುರ, ಸಿದ್ಧಾಪುರ, ಹಳಿಯಾಳ, ಜೊಯ್ಡ (ಸುಪ), ಮುಂಡಗೋಡ ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ನಲ್ಲಿ ಆರಂಭಗೊಂಡು ಅಕ್ಟೋಬರ್ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2836 ಮಿಮೀ. ಕರಾವಳಿಯಲ್ಲಿ ಸಹ್ಯಾದ್ರಿಯ ಅಂಚಿನಲ್ಲಿ ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲು, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ.

ಉತ್ತರ ಕನ್ನಡದ ಕಲೆ ಮತ್ತು ಸಂಸ್ಕ್ರತಿ :-

North Canara Culture :-


                             

                             ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, ಉರ್ದು, ಮರಾಠಿ ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, ಜಿ.ಆರ್.ಹೆಗಡೆ, ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, ವಿ.ಗ.ನಾಯಕ ಮೊದಲಾದವರು ಪ್ರಮುಖರು. ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಶಿ, ಕೆರೆಮನೆ ಗಜಾನನ ಹೆಗಡೆ, ಪಿ.ವಿ.ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (2004). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ.


                    ಹೀಗೆ ನಮ್ಮ ಉತ್ತರ ಕನ್ನಡವು ಬೇರೆ ಜಿಲ್ಲೆಗಳಿಗಿಂತಾ ಭೌಗೋಳಿಕವಾಗಿ, ಸಂಸ್ಕ್ರತಿಕವಾಗಿ, ಆಹಾರ ಮತ್ತು ಅನೇಕ ಪ್ರೇಕ್ಷಣೀಯ ಸ್ಥಳಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. 

ಇದು ನಮ್ಮ ಉತ್ತರ ಕನ್ನಡದ ಸಣ್ಣ ಪರಿಚಯ
ಬನ್ನಿ ಒಮ್ಮೆ ಭೇಟಿ ನೀಡಿ ಹಾಗು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ .