ಉತ್ತರ ಕನ್ನಡ ಜಿಲ್ಲೆಯು ಹೇಗೆ ಬೇರೆ ಜಿಲ್ಲೆಗಳಿಗಿಂತ ವಿಭಿನ್ನ ..!
How Uttara Kannada District is Different Than Other Districts...!
"ಉತ್ತರ ಕನ್ನಡ(north canara)" ಜಿಲ್ಲೆಯು ಕರಾವಳಿ, ಮಲೆನಾಡು ಹಾಗು ಬಯಲು ಸೀಮೆಯನ್ನು ಒಳಗೊಂಡ ಒಂದು ವಿಭಿನ್ನ ಕರ್ನಾಟಕದ ಜಿಲ್ಲೆಯಾಗಿದೆ. ಇಲ್ಲಿ ನಿಮಗೆ ಕರಾವಳಿಯ ಸಮುದ್ರವು ಸಿಗುವುದು, ಮಲೆನಾಡಿನ ವೈಭವವು ಕಾಣಸಿಗುವುದು.
ಒಟ್ಟು ೧೨(12) ತಾಲ್ಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗೆ ಕಾರವಾರವು ಜಿಲ್ಲಾ ಕೇಂದ್ರವಾಗಿದೆ .
- ಕಾರವಾರ / karwar ( ಜಿಲ್ಲಾಕೇಂದ್ರ )
- ಅಂಕೋಲಾ / ankola
- ಕುಮಟಾ / kumta
- ಹೊನ್ನಾವರ / honnavar
- ಭಟ್ಕಳ / bhatkal
- ಶಿರಸಿ / sirsi
- ಸಿದ್ದಾಪುರ / siddapur
- ಯಲ್ಲಾಪುರ / yallapur
- ಮುಂಡಗೋಡ / mundgod
- ಹಳಿಯಾಳ / haliyal
- ಜೋಯಿಡಾ / joida
- ದಾಂಡೇಲಿ / dandeli ( ಹೊಸದಾದ ತಾಲ್ಲೂಕು )
ಉತ್ತರ ಕನ್ನಡ ಜಿಲ್ಲೆಯ ಇತಿಹಾಸ :- History of North Canara :-
ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.4-3ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಅಶೋಕನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. 2 ರಿಂದ ಪ್ರ.ಶ.3ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. 2 ಮತ್ತು 3ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. 4 ರಿಂದ 6ನೆಯ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಾಳುಕ್ಯರು (6-8ನೆಯ ಶತಮಾನ), ರಾಷ್ಟ್ರಕೂಟರೂ (8-10ನೆಯ ಶತಮಾನ) ಆಳಿದರು. ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗ ಬನವಾಸಿ 12000 ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. 11 ಮತ್ತು 13ನೆಯ ಶತಮಾನಗಳಲ್ಲಿ ಹಾನಗಲ್ಲು ಮತ್ತು ಗೋವೆಯ ಕದಂಬರು ಚಾಳುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಭ್ಯ ಸು.16ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. 17-18ನೆಯ ಶತಮಾನಗಳಲ್ಲಿ ಕೆಳದಿಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳೆಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. 18ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು. 1799ರಲ್ಲಿ ಶ್ರೀರಂಗಪಟ್ಟಣದ ಪತನವಾದ ಅನಂತರ ಇದು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತರಚನೆಯ ಅನಂತರ (1956) ಕರ್ನಾಟಕ ರಾಜ್ಯಕ್ಕೆ ಸೇರಿತು.
ಉತ್ತರ ಕನ್ನಡ ಭೂಗೋಳ :-
North Canara Geography :-
ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ ಕರಾವಳಿ ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, ಗೇರುಸೊಪ್ಪೆಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ. ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ ಕಾರವಾರ, ಅಂಕೋಲ, ಕುಮಟ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿವೆ. ಘಟ್ಟದ ಮೇಲೆ ಶಿರಸಿ, ಯಲ್ಲಾಪುರ, ಸಿದ್ಧಾಪುರ, ಹಳಿಯಾಳ, ಜೊಯ್ಡ (ಸುಪ), ಮುಂಡಗೋಡ ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ನಲ್ಲಿ ಆರಂಭಗೊಂಡು ಅಕ್ಟೋಬರ್ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2836 ಮಿಮೀ. ಕರಾವಳಿಯಲ್ಲಿ ಸಹ್ಯಾದ್ರಿಯ ಅಂಚಿನಲ್ಲಿ ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲು, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ.
ಉತ್ತರ ಕನ್ನಡದ ಕಲೆ ಮತ್ತು ಸಂಸ್ಕ್ರತಿ :-
North Canara Culture :-
ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, ಉರ್ದು, ಮರಾಠಿ ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, ಜಿ.ಆರ್.ಹೆಗಡೆ, ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, ವಿ.ಗ.ನಾಯಕ ಮೊದಲಾದವರು ಪ್ರಮುಖರು. ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಶಿ, ಕೆರೆಮನೆ ಗಜಾನನ ಹೆಗಡೆ, ಪಿ.ವಿ.ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (2004). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ.
ಹೀಗೆ ನಮ್ಮ ಉತ್ತರ ಕನ್ನಡವು ಬೇರೆ ಜಿಲ್ಲೆಗಳಿಗಿಂತಾ ಭೌಗೋಳಿಕವಾಗಿ, ಸಂಸ್ಕ್ರತಿಕವಾಗಿ, ಆಹಾರ ಮತ್ತು ಅನೇಕ ಪ್ರೇಕ್ಷಣೀಯ ಸ್ಥಳಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.
ಇದು ನಮ್ಮ ಉತ್ತರ ಕನ್ನಡದ ಸಣ್ಣ ಪರಿಚಯ
ಬನ್ನಿ ಒಮ್ಮೆ ಭೇಟಿ ನೀಡಿ ಹಾಗು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ .
Casino in Reno | DrmCD
ReplyDeleteExperience 포천 출장샵 the best in gaming, 의정부 출장안마 dining, hotel, entertainment, and 의왕 출장안마 more at this Reno-Tahoe resort. Built with the world's 광주 출장안마 first integrated hotel, the 상주 출장안마 casino provides