ಯಾಣ ( YANA )
Photo ಕೃಪೆ:- Gopi Jolly
ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಕುಮಟಾದಿಂದ ೨೮(28) ಹಾಗು ಶಿರಸಿ ಇಂದ ೫೩(53) ಕಿ.ಮಿ. ದೂರದಲ್ಲಿದೆ. " ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ” ಎಂಬ ಮಾತು ಚಾಲ್ತಿಯಲ್ಲಿದೆ. ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ರಸ್ತೆಯಾಗಿದೆ. ಕೇವಲ ಒಂದು ಕಿಲೋಮೀಟರ ದೂರವನ್ನಷ್ಟೇ ನಡೆಯಬೇಕಾಗುವದು. ಕುಮಟೆಯಿಂದ ಹರಿಟೆಯ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿ ಶಿರಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಕಾಡಿನಲ್ಲಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ.
ಯಾಣದ ಇತಿಹಾಸ :-
History Of Yana :-
ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦(120) ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು.
ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ.
ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ.
ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ.
ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ.ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ.
ಯಾಣದ ಅಂತರ :-
Distance Of Yana :-
- ಕುಮಟಾ (Kumta) To ಯಾಣ(Yana) :- ೨೮(28)km
- ಶಿರಸಿ (Sirsi) To ಯಾಣ(Yana) :- ೫೩(53)km
- ಕಾರವಾರ (Karwar) To ಯಾಣ(Yana) :- ೯೧(91)km
- ಮಂಗಳೂರು (Mangalore) To ಯಾಣ(Yana) :- ೨೨೮(228)km
- ಬೆಂಗಳೂರು (Bengalure) To ಯಾಣ(Yana) :- ೪೫೮(458)km
ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ
ಬನ್ನಿ ಯಾಣಕ್ಕೆ ಒಮ್ಮೆ ಭೇಟಿ ನೀಡಿ
No comments:
Post a Comment